ಇನ್‌ಸ್ಟಾಗ್ರಾಮ್ ಸ್ನೇಹ ಬೆಳೆಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಗುರುಪುರದ ಯುವಕನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ!
- ದಂಡ ವಿಧಿಸಿದ ಪೋಕ್ಸೋ ನ್ಯಾಯಾಲಯ; ಸಂತ್ರಸ್ತೆಗೆ ₹6 ಲಕ್ಷ ಪರಿಹಾರಧನ ನೀಡಲು ಆದೇಶ
- ಬ್ಲ್ಯಾಕ್‌ಮೇಲ್ ಕಿರುಕುಳಕ್ಕೆ ನೊಂದು ಬಾಲಕಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ
ಮಂಗಳೂರು: ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್ ಮೂಲಕ ಅಪ್ರಾಪ್ತ ಬಾಲಕಿಯನ್ನು ಪರಿಚಯಿಸಿಕೊಂಡು, ತದನಂತರ ಪ್ರೀತಿಯ ಜಾಲ ಬೀಸಿ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ವಿಡಿಯೋ ಬಹಿರಂಗಪಡಿಸುವುದಾಗಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣದ ಅಪರಾಧಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಎಫ್‌ಟಎಸ್‌ಸಿ-2 ಪೋಕ್ಸೋ ಕೋರ್ಟ್ 20 ವರ್ಷಗಳ ಕಠಿಣ ಜೈಲು ವಾಸ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಗುರುಪುರ ಮೂಡೂರು ಕೆಳಗಿನಕೆರೆಮನೆ ನಿವಾಸಿಯಾದ ಕಾರ್ ಚಾಲಕ ಆಫ್ರಿದಿ ಅಲಿಯಾಸ್ ಆಫ್ರಿ (20) ಕಠಿಣ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾನೆ.
ಇನ್‌ಸ್ಟಾಗ್ರಾಮ್ ಗೆಳೆತನ, ಪ್ರೀತಿಯ ನಾಟಕ:
ಬಂಟ್ವಾಳ ತಾಲೂಕಿನ ನಿವಾಸಿಯಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಫ್ಯಾಷನ್ ಡಿಸೈನಿಂಗ್ ತರಬೇತಿ ಪಡೆಯುತ್ತಿದ್ದಾಗ ಆಕೆಗೆ ಇನ್‌ಸ್ಟಾಗ್ರಾಮ್ ಮೂಲಕ ಆಫ್ರಿದಿ ಪರಿಚಯವಾಗಿದ್ದ. ಮೊದಲು ಆತ್ಮೀಯವಾಗಿ ಮಾತನಾಡುತ್ತಾ ಗೆಳೆತನ ಬೆಳೆಸಿದ್ದ ಆರೋಪಿ, ನಂತರ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಯ ನಾಟಕವಾಡಿದ್ದ. 2024ರ ಮೇ 27ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಾಲಕಿ ತನ್ನ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದಾಗ ಅಲ್ಲಿಗೆ ತೆರಳಿದ ಆಫ್ರಿದಿ, ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ, ಆ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಆರೋಪಿ, ಮುಂದೆ ತಾನು ಕರೆದಾಗ ದೈಹಿಕ ಸಂಪರ್ಕಕ್ಕೆ ಸಿಗದಿದ್ದರೆ ದೃಶ್ಯಗಳನ್ನು ಇಂಟರ್ನೆಟ್‌ನಲ್ಲಿ ವೈರಲ್ ಮಾಡುವುದಾಗಿ ಹಾಗೂ ಜೀವಸಹಿತ ಬಿಡುವುದಿಲ್ಲ ಎಂದು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿ ದೌರ್ಜನ್ಯ ನಡೆಸಿದ್ದ.
ಹೊಸ ಮನೆಗೂ ಬೆನ್ನಟ್ಟಿದ ಕಿರಾತಕ:
ಆರೋಪಿಯ ನಿರಂತರ ಕಿರುಕುಳ ಮತ್ತು ಬೆದರಿಕೆಯಿಂದ ಬಸವಳಿದ ಬಾಲಕಿಯ ಪೋಷಕರು 2025ರ ಜೂನ್ 1ರಂದು ಬಂಟ್ವಾಳದಿಂದ ಬೆಳ್ತಂಗಡಿ ತಾಲೂಕಿನ ಬೇರೆ ಬಾಡಿಗೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಆದರೆ, ಈ ಹೊಸ ವಿಳಾಸವನ್ನೂ ಹುಡುಕಿಕೊಂಡು ಹೋದ ಕಾಮುಕ ಆಫ್ರಿದಿ, 2025ರ ಆಗಸ್ಟ್ 6ರಂದು ಬೆಳ್ತಂಗಡಿಯ ಮನೆಗೂ ನುಗ್ಗಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಾದ ನಂತರ ಬಾಲಕಿಯಿಂದ ದೂರ ಸರಿದಿದ್ದ ಆಫ್ರಿದಿಯನ್ನು 2025ರ ಆಗಸ್ಟ್ 30ರಂದು ಬಾಲಕಿ ಪ್ರಶ್ನಿಸಿದಾಗ, ಆಕೆಗೆ ವಂಚಿಸಿ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಧಮಕಿ ಹಾಕಿದ್ದ.
ಮನನೊಂದು ಆತ್ಮಹತ್ಯೆಗೆ ಯತ್ನ:
ಆರೋಪಿಯ ಈ ನಯವಂಚನೆಯಿಂದ ತೀವ್ರ ಮಾನಸಿಕವಾಗಿ ನೊಂದ ಅಪ್ರಾಪ್ತ ಬಾಲಕಿ, ತನ್ನ ಮನೆಯಲ್ಲೇ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಳು. ತಕ್ಷಣವೇ ಪೋಷಕರು ಆಕೆಯನ್ನು ದೇರಲಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ಘಟನೆಯ ನಂತರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ನ್ಯಾಯಾಲಯ ವಿಧಿಸಿದ ಕಠಿಣ ಶಿಕ್ಷೆ:
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್. ಮಾನು ಅವರು ಆರೋಪಿಯ ಮೇಲಿನ ಎಲ್ಲಾ ಅಪರಾಧಗಳು ಸಾಬೀತಾಗಿವೆ ಎಂದು ಪ್ರಕಟಿಸಿದರು.
- ಪೋಕ್ಸೋ ಕಾಯ್ದೆಯಡಿ: ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿಯಾಗಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು.
- IPC 506 (ಜೀವ ಬೆದರಿಕೆ) ಅಡಿ: 3 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ದಂಡ ಕಟ್ಟದಿದ್ದರೆ 15 ದಿನಗಳ ಸಾದಾ ಶಿಕ್ಷೆ ವಿಧಿಸಲಾಗಿದೆ. ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಲು ಕೋರ್ಟ್ ಆದೇಶಿಸಿದೆ.
ಸಂತ್ರಸ್ತೆಗೆ ₹6 ಲಕ್ಷ ಪರಿಹಾರಕ್ಕೆ ಆದೇಶ:
ನ್ಯಾಯಾಲಯವು ತೊಂದರೆಗೊಳಗಾದ ಬಾಲಕಿಗೆ ಒಟ್ಟು 6 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. .
ಈ ಪ್ರಕರಣದ ವ್ಯವಸ್ಥಿತ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸುವಲ್ಲಿ ಬೆಳ್ತಂಗಡಿ ಠಾಣೆಯ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ಕಾರ್ಯನಿರ್ವಹಿಸಿದ್ದರು. ನ್ಯಾಯಾಲಯದಲ್ಲಿ ಸಂತ್ರಸ್ತೆಯ ಪರವಾಗಿ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ವಾದ ಮಂಡಿಸಿದ್ದರು.