ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ರಾಮ ಮಂದಿರ ದೇಣಿಗೆ ಆರೋಪ: ತನಿಖೆಯಿಂದಷ್ಟೇ ಸತ್ಯ ಹೊರಬರಲು ಸಾಧ್ಯ; ಪೇಜಾವರ ಶ್ರೀ


ಉಡುಪಿ: ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಆರೋಪದ ಕುರಿತು ಕೇವಲ ಮಾಧ್ಯಮಗಳ ವರದಿಗಳನ್ನು ಆಧರಿಸಿ ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರೂ ಆಗಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

​ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಜುಲೈ 11 ರಂದು ಟ್ರಸ್ಟ್‌ನ ಅಧಿಕೃತ ಸಭೆ ನಿಗದಿಯಾಗಿದೆ. ಆ ಸಭೆಯಲ್ಲಿ ಈ ಎಲ್ಲಾ ವಿಷಯಗಳು ಚರ್ಚೆಗೆ ಬರಲಿದ್ದು, ಅಲ್ಲಿ ಸಂಪೂರ್ಣ ಮಾಹಿತಿ ಹಾಗೂ ವಾಸ್ತವಾಂಶಗಳನ್ನು ಪಡೆದುಕೊಂಡ ಬಳಿಕವಷ್ಟೇ ತಾವು ಅಧಿಕೃತವಾಗಿ ಪ್ರತಿಕ್ರಿಯಿಸುವುದಾಗಿ ಸ್ಪಷ್ಟಪಡಿಸಿದರು.

​ರಶೀದಿ ಇಲ್ಲದ ಆರೋಪ ನಂಬುವುದು ಕಷ್ಟ

​ಸಿಂಧಿ ಸಮುದಾಯದವರು ನೀಡಿದ್ದಾರೆ ಎನ್ನಲಾದ 200 ಕೆಜಿ ಬೆಳ್ಳಿ ದೇಣಿಗೆಗೆ ಸೂಕ್ತ ಗೌರವ ಸಿಕ್ಕಿಲ್ಲ ಎಂಬ ದೂರಿನ ಬಗ್ಗೆ ಮಾತನಾಡಿದ ಶ್ರೀಗಳು, ದೊಡ್ಡ ಪ್ರಮಾಣದ ಕಾಣಿಕೆ ನೀಡುವಾಗ ಸ್ಥಳದಲ್ಲೇ ರಶೀದಿ ಪಡೆದುಕೊಳ್ಳುವುದು ಮುಖ್ಯ. ಇಲ್ಲಿ ಕೊಡುವವರಿಗೂ ಹಾಗೂ ಪಡೆಯುವವರಿಗೂ ಸಮಾನ ಜವಾಬ್ದಾರಿ ಇರುತ್ತದೆ. ರಶೀದಿ ನೀಡದೇ ಇರುವುದು ಖಂಡಿತಾ ದೊಡ್ಡ ತಪ್ಪು. ಬರೀ ಮೌಖಿಕ ಹೇಳಿಕೆಗಳಿಗೆ ಮಾನ್ಯತೆ ಇರುವುದಿಲ್ಲ. ಆರೋಪದ ಹಿಂದೆ ಸತ್ಯ ಇರಬಹುದಾದರೂ, ರಶೀದಿ ನೀಡಿಲ್ಲ ಎಂಬ ಮಾತನ್ನು ಒಪ್ಪುವುದು ಕಷ್ಟ ಎಂದರು.

​ಎಸ್‌ಐಟಿ ತನಿಖೆಗೆ ಸ್ವಾಗತ

​ಪ್ರಕರಣದ ಕುರಿತು ನಡೆಯುತ್ತಿರುವ ಎಸ್‌ಐಟಿ (SIT) ತನಿಖೆಯನ್ನು ಸ್ವಾಗತಿಸಿದ ಪೇಜಾವರ ಶ್ರೀಗಳು, ತಪ್ಪು ನಡೆದಿದ್ದರೆ ಖಂಡಿತಾ ಅದರ ಮರುಪರಿಶೀಲನೆ ಆಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಭಕ್ತರ ಆಸ್ತಿಯಾಗಿರುವ ಇಂತಹ ಪವಿತ್ರ ಸ್ಥಳದಲ್ಲಿ ಇಂತಹ ಘಟನೆಗಳು ಜರುಗಬಾರದಿತ್ತು. ಒಂದು ವೇಳೆ ನಡೆದಿದ್ದರೂ ಸಹ ಸತ್ಯ ಶೀಘ್ರದಲ್ಲೇ ಜನರೆದುರು ಬರಬೇಕು ಎಂದರು. ತಾವೊಬ್ಬ ಟ್ರಸ್ಟ್ ಸದಸ್ಯರಾಗಿ ಹೋದಾಗಲೆಲ್ಲ ಸೂಕ್ತ ಸಲಹೆಗಳನ್ನು ನೀಡುತ್ತಿದ್ದುದ್ದಾಗಿ ನೆನಪಿಸಿಕೊಂಡ ಅವರು, ಸಂಬಂಧಪಟ್ಟವರು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಬೇಕಿತ್ತು ಎಂದರು.

​ಬೆಳ್ಳಿ ಕೊಡುವುದಕ್ಕಿಂತ ಮನೆ ಕಟ್ಟುವುದು ಶ್ರೇಷ್ಠ

​ಮಂದಿರದಲ್ಲಿ ಸೇವಾ ಪಟ್ಟಿ ಪ್ರದರ್ಶಿಸದ ನಿರ್ಧಾರದ ಕುರಿತು ಮಾತನಾಡುತ್ತಾ, ತಾವು ಈ ಹಿಂದೆ ನೀಡಿದ್ದ ಕರೆಯನ್ನು ಪುನರುಚ್ಚರಿಸಿದರು. ಮಂದಿರಕ್ಕೆ ಭಾರಿ ಪ್ರಮಾಣದ ಧನಸಹಾಯ ಮಾಡುವ ಬದಲು ಬಡವರಿಗೆ ಆಸರೆ ನೀಡುವುದು ನಿಜವಾದ ರಾಮಸೇವೆ. ನೂರು ಕೆಜಿ ಬೆಳ್ಳಿ ಕೊಡುವುದಕ್ಕಿಂತ ಸಾವಿರಾರು ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

​ಪ್ರಸ್ತುತ ತನಿಖೆಯ ಕುರಿತು ಮಾತನಾಡಿದ ಶ್ರೀಗಳು, ರಾಜ್ಯ ಸರ್ಕಾರವು ಈ ವಿಷಯದಲ್ಲಿ ನಿಷ್ಪಕ್ಷಪಾತ ಹಾಗೂ ಸಮರ್ಪಕವಾಗಿ ತನಿಖೆ ನಡೆಸಲಿದೆ ಎಂಬ ಭರವಸೆ ತಮಗಿದೆ ಎಂದರು. ಇದೇ ವೇಳೆ ಆರ್‌ಎಸ್‌ಎಸ್ (RSS) ಸಂಸ್ಥೆಯ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಸಂಘಟನೆಯು ಅಧಿಕೃತವಾಗಿ ನೋಂದಣಿಯಾದರೆ ಯಾರಿಗೂ ಅದರ ಮೇಲೆ ಅನಗತ್ಯ ಆರೋಪ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.