ಬೆಂಗಳೂರು: ಆಸ್ಪತ್ರೆಯ ಆಪರೇಷನ್ ಥಿಯೇಟರ್ನ (ಒಟಿ) ಡ್ರೆಸಿಂಗ್ ರೂಮ್ನಲ್ಲಿ ಯುವತಿ ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಮಾಡಲು ಯತ್ನಿಸಿದ ಜೂನಿಯರ್ ಟೆಕ್ನಿಷಿಯನ್ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ ಎರಡನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ ಡಾ.ಚೇತನ್ ಎಂಬುವರು ನೀಡಿದ ದೂರಿನ ಮೇರೆಗೆ ಸುವೆಂದು ಮೊಹತಾ (23) ಎಂಬುವನನ್ನ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ಧಾರೆ.
ಪಶ್ಚಿಮಬಂಗಾಳ ಮೂಲದ ಸುವೆಂದು ಕಳೆದ ಒಂದು ವರ್ಷದಿಂದ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಜೂನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಕೊಟ್ಟಿಗೆಪಾಳ್ಯದ ಪಿಜಿಯೊಂದರಲ್ಲಿ ನೆಲೆಸಿದ್ದ. ಡಿ.20ರಂದು ಬೆಳಗ್ಗೆ 8.30ರ ಸುಮಾರಿಗೆ ಶಸ್ತ್ರ ಚಿಕಿತ್ಸಾ ಘಟಕದ ಕೊಠಡಿಯಲ್ಲಿ ಯುವತಿಯರು ಬಟ್ಟೆ ಬದಲಾಯಿಸುವಾಗ ಆರೋಪಿ ಇಟ್ಟಿದ್ದ ಮೊಬೈಲ್ ಗಮನಿಸಿದ್ದಾರೆ. ಆತಂಕಗೊಂಡ ಸಿಬ್ಬಂದಿಯು ಮೊಬೈಲ್ ಪರಿಶೀಲಿಸಿದಾಗ ಗುಪ್ತವಾಗಿ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

