ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ: ಬೇರೆ ಜಾತಿ ಯುವಕನ ಮದುವೆಯಾದ ಗರ್ಭಿಣಿ ಪುತ್ರಿಯನ್ನೇ ಕೊಂದ ಅಪ್ಪ!
ಬೇರೆ ಜಾತಿಯ ಯುವಕನನ್ನು ಪ್ರೀತಿಸಿ, ಮದುವೆಯಾಗಿದ್ದ ಮಗಳನ್ನು ತಂದೆಯೇ ಭೀಕರವಾಗಿ ಹಲ್ಲೆಗೈದು ಹತ್ಯೆ ಮಾಡಿರುವ ಮರ್ಯಾದಾ ಪ್ರಕರಣ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಡಿಸೆಂಬರ್ 21ರ ರವಿವಾರ ನಡೆದಿದೆ. ಮೃತಳ ಪತಿ ನೀಡಿದ ದೂರಿನ ಅನ್ವಯ ಪ್ರಮುಖ ಆರೋಪಿಗಳು ಸೇರಿದಂತೆ ಹಲವು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಯ ವಿವರ
7 ತಿಂಗಳ ಗರ್ಭಿಣಿಯಾಗಿದ್ದ ಮಾನ್ಯ ಪಾಟೀಲ (20) ಕೊಲೆಗೀಡಾದ ಗರ್ಭಿಣಿ. ಯುವತಿಯ ತಂದೆ ಪ್ರಕಾಶಗೌಡ ಪಾಟೀಲ, ಕುಟುಂಬಸ್ಥರಾದ ಗುರುಸಿದ್ದನಗೌಡ ಪಾಟೀಲ ಹಾಗೂ ಅಕ್ಷಯಗೌಡ ಹತ್ಯೆ ಮಾಡಿರುವ ಪ್ರಮುಖ ಆರೋಪಿಗಳು. ಮಾರಕಾಸ್ತ್ರಗಳಿಂದ ಭೀಕರ ದಾಳಿ ಮಾಡಿದ್ದರಿಂದ ಗಂಭೀರ ಗಾಯಗೊಂಡಿದ್ದ ಮಾನ್ಯ ಕೊನೆಯುಸಿರೆಳೆದಿದ್ದಾರೆ.
ಮಾನ್ಯ ಪಾಟೀಲ ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸಿದ್ದಳು. ಈ ವಿವಾಹಕ್ಕೆ ಮೇಲ್ವರ್ಗಕ್ಕೆ ಸೇರಿದ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯಿತಿಯ ಬಳಿಕ ಏಳು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ನಂತರ ಪ್ರಾಣ ಭಯದಿಂದ ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದ ದಂಪತಿ, ಡಿಸೆಂಬರ್ 8ರಂದು ಊರಿಗೆ ಮರಳಿದ್ದರು. ಆದರೆ, ದ್ವೇಷದ ಕಿಚ್ಚು ಹಚ್ಚಿಕೊಂಡಿದ್ದ ಯುವತಿಯ ತಂದೆ, ಇತರರು ರವಿವಾರ ಸಂಜೆ ವಿವೇಕಾನಂದನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಮಾನ್ಯಳನ್ನು ರಕ್ಷಿಸಲು ಬಂದ ವಿವೇಕಾನಂದನ ಮನೆಯವರ ಮೇಲೂ ಮನಬಂದಂತೆ ತೀವ್ರ ಹಲ್ಲೆಯನ್ನು ನಡೆಸಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿ ಮಾನ್ಯ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಇತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣದಲ್ಲಿ ಯುವತಿಯ ತಂದೆ ಪ್ರಕಾಶ ಗೌಡ ಪಾಟೀಲ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ
ಮಾನ್ಯ ಮೇಲೆ ಹಲ್ಲೆ ನಡೆಸುವ ಮುನ್ನ ಆರೋಪಿಗಳು ವಿವೇಕಾನಂದನ ತಂದೆ ಹಾಗೂ ಮಾವನಿಗೆ ಗ್ರಾಮದ ಹೊರವಲಯದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಬಂದ ವಿವೇಕಾನಂದನನ್ನೂ ಹತ್ಯೆ ಮಾಡಲು ಬೆನ್ನಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿವೇಕಾನಂದ ನೀಡಿದ ದೂರಿನ ಪ್ರಕಾರ, ಪ್ರಮುಖ ಆರೋಪಿಗಳಾದ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ, ಗುರುಸಿದ್ದನಗೌಡ ಪಾಟೀಲ ಹಾಗೂ ಅಕ್ಷಯಗೌಡ ಪಾಟೀಲ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ರವಿವಾರ ಸಂಜೆ ಆರೋಪಿಗಳು ತನ್ನ ತಂದೆ ಮರಿಯಪ್ಪ ದೊಡ್ಡಮನಿ ಹಾಗೂ ಮಾವ ಸುನೀಲ ಅವರು ಗ್ರಾಮದ ಹೊರವಲಯದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಸುದ್ದಿ ತಿಳಿದು ಅಲ್ಲಿಗೆ ಹೋದ ವಿವೇಕಾನಂದನನ್ನೂ ಸಹ ಕೊಲೆ ಮಾಡಲು ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಬೆನ್ನಟ್ಟಿದ್ದರು. ಆದರೆ ವಿವೇಕಾನಂದ ತಪ್ಪಿಸಿಕೊಂಡಿದ್ದಾನೆ. ನಂತರ ಆರೋಪಿಗಳು ಅವಾಚ್ಯ ಶಬ್ದಗಳೊಂದಿಗೆ ನಿಂದಿಸುತ್ತಾ ವಿವೇಕಾನಂದನ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಸಿಸಿಟಿವಿ ಕ್ಯಾಮರಾ ಹಾನಿಗೊಳಿಸಿ, ಆತನ ತಾಯಿ ರೇಣುಕಾ ದೊಡ್ಡಮನಿ, ಪತ್ನಿ ಮಾನ್ಯ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಬಿಡಿಸಲು ಹೋದ ದೊಡ್ಡಪ್ಪ ಯಲ್ಲಪ್ಪ ದೊಡ್ಡಮನಿ ಇತರರಿಗೂ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಹೇಳಿಕೆ
ಈ ಬಗ್ಗೆ ಮಾತನಾಡಿರುವ ಎಸ್ಪಿ ಗುಂಜನ್ ಆರ್ಯ ''ಸಂಜೆ 6.30 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯುವತಿಯ ತಂದೆ ಪ್ರಕಾಶ ಗೌಡ ಸೇರಿ ಮೂರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮರ್ಯಾದಾ ಹತ್ಯೆ ಅಂತ ನಾವು ಹೇಳಲು ಆಗುವುದಿಲ್ಲ. ಕಳೆದ ಮೇ ತಿಂಗಳಿನಲ್ಲಿ ವಿವೇಕಾನಂದ ಎಂಬವರ ಜೊತೆ ಮಾನ್ಯ ವಿವಾಹವಾಗಿದ್ದರು. ಆದರೆ ಮಗಳ ಮದುವೆಗೆ ಪೋಷಕರ ಒಪ್ಪಿಗೆ ಇರಲಿಲ್ಲ. ಕೃತ್ಯಕ್ಕೆ ಇದೇ ಕಾರಣ ಇರಬಹುದು. ಈ ಕುರಿತಂತೆ ತನಿಖೆ ಕೈಗೊಳ್ಳಲಾಗುತ್ತಿದೆ'' ಎಂದು ಹೇಳಿದ್ದಾರೆ.
ಪತಿಯ ಮಾವನ ಹೇಳಿಕೆ
ವಿವೇಕಾನಂದನ ಮಾವ ಬಸವರಾಜ್ ಮಾತನಾಡಿ, ''ಇವರಿಬ್ಬರೂ ಕಾಲೇಜಿನಲ್ಲಿದ್ದಾಗ ಪ್ರೀತಿ ಮಾಡುತ್ತಿದ್ದರು. ಈ ವಿಷಯ ನಮ್ಮ ಮಾವನವರಿಗೆ ಗೊತ್ತಾಗಿ, ನಮ್ಮ ಜಾತಿ ಬೇರೆ, ಅವರ ಜಾತಿ ಬೇರೆ, ಇದನ್ನು ಇಲ್ಲಿಗೆ ಬಿಡಿ ಅಂತ ಬುದ್ಧಿವಾದ ಹೇಳಿದ್ದರು. ಆದರೆ ಹುಡುಗಿಯೇ ನೀನು ನನ್ನನ್ನು ಮದುವೆ ಆಗದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಯುವಕನಿಗೆ ಹೇಳಿದ್ದಳು. ಹೀಗಾಗಿ ಇಬ್ಬರೂ ವಿವಾಹವಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದರು. ನಿನ್ನೆ ಮನೆಗೆ ಬಂದ ಹುಡುಗಿಯ ತಂದೆ ಹಾಗೂ ಸಂಬಂಧಿಗಳು ಸಿಸಿಟಿವಿ ಒಡೆದುಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದೊಂದು ಮರ್ಯಾದಾ ಹತ್ಯೆ, ಕೆಳಜಾತಿಯವರು ಮೇಲ್ಜಾತಿಯವರನ್ನು ಪ್ರೀತಿಸಬಾರದಾ? ಈ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು'' ಎಂದು ಒತ್ತಾಯಿಸಿದರು.
