-->
ಮಂಗಳೂರು: ವಿವಾಹ ಕಲಹ ಕೊಲೆಯಲ್ಲಿ ಅಂತ್ಯ- ಮದುವೆ ದಲ್ಲಾಳಿ ಸಾವು, ಮಕ್ಕಳಿಬ್ಬರಿಗೆ ಗಾಯ

ಮಂಗಳೂರು: ವಿವಾಹ ಕಲಹ ಕೊಲೆಯಲ್ಲಿ ಅಂತ್ಯ- ಮದುವೆ ದಲ್ಲಾಳಿ ಸಾವು, ಮಕ್ಕಳಿಬ್ಬರಿಗೆ ಗಾಯ




ಮಂಗಳೂರು: ವಿವಾಹ ವಿಚಾರದ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ. ಚೂರಿ ಇರಿತದಿಂದ ಮದುವೆ ದಲ್ಲಾಳಿ ಮೃತಪಟ್ಟು, ಅವರ ಮಕ್ಕಳಿಬ್ಬರು ಗಾಯಗೊಂಡ ಘಟನೆ ಗುರುವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಳಚಿಲ್ ಎಂಬಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಾಮಂಜೂರು ನಿವಾಸಿ ಸುಲೇಮಾನ್ (50) ಮೃತಪಟ್ಟವರು. ಘಟನೆಯಲ್ಲಿ ಅವರ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ. ಮುಸ್ತಫಾ(30) ಬಂಧಿತ ಆರೋಪಿ.

ಮೇ 22ರಂದು ರಾತ್ರಿ 9:30 ಸುಮಾರಿಗೆ ಘಟನೆ ನಡೆದಿದೆ. ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಮೃತ ಸುಲೇಮಾನ್ 8ತಿಂಗಳ ಹಿಂದೆ ತನ್ನ ಸಂಬಂಧಿಯಾದ ಆರೋಪಿ ಮುಸ್ತಫಾ(30)ನಿಗೆ ಯುವತಿಯೊಬ್ಬಳೊಂದಿಗೆ ವಿವಾಹ ಸಂಧಾನ ಮಾಡಿ ಮದುವೆಗೆ ಅನುಕೂಲ ಮಾಡಿದ್ದರು. ಬಳಿಕ ಅವರಿಬ್ಬರ ವೈವಾಹಿಕ ಜೀವನದ ಭಿನ್ನಾಭಿಪ್ರಾಯದಿಂದ, 2ತಿಂಗಳ ಹಿಂದೆ ಮುಸ್ತಫಾನ ಪತ್ನಿ ಆತನ ಮನೆ ತೊರೆದು ತವರು ಮನೆ ಸೇರಿದ್ದಳು. ಇದು ಮುಸ್ತಫಾ ಮತ್ತು ಸುಲೇಮಾನ್ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಈ ಬಗ್ಗೆ ಅನೇಕ ಸಲ ಮಾತುಕತೆ ನಡೆದರೂ ಅದು ಫಲಪ್ರದವಾಗಿರಲಿಲ್ಲ.

ಮೇ 22ರ ರಾತ್ರಿ ಸುಲೇಮಾನ್‌ ಅವರಿಗೆ ಮುಸ್ತಫಾ ಕರೆ ಮಾಡಿ ನಿಂದಿಸಿದ್ದ. ಆದ್ದರಿಂದ ಸುಲೇಮಾನ್ ತಮ್ಮ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಅವರೊಂದಿಗೆ ವಳಚಿಲ್‌ನಲ್ಲಿರುವ ಮುಸ್ತಫಾ ನಿವಾಸಕ್ಕೆ ಭೇಟಿ ನೀಡಿದ್ದರು. ಸುಲೇಮಾನ್ ಮನೆಯೊಳಗೆ ಹೋಗಿ ಮುಸ್ತಫಾನೊಂದಿಗೆ ಮಾತನಾಡಿ ಕೆಲ ಹೊತ್ತಿನಲ್ಲಿ ಹಿಂದುರಿಗಿ, ಮಾತುಕತೆ ಫಲಪ್ರದವಾಗಿಲ್ಲ, ನಾವು ಹೊರಡೋಣ ಎಂದು ಮಕ್ಕಳಿಗೆ ಸೂಚಿಸಿದ್ದರು.

ಅಷ್ಟರಲ್ಲಿ ಮುಸ್ತಫಾ ಮನೆಯಿಂದ ಓಡಿ ಬಂದು ಬ್ಯಾರಿ ಭಾಷೆಯಲ್ಲಿ ಬೆದರಿಕೆ ಹಾಕುತ್ತಾ ಏಕಾಏಕಿ ಸುಲೇಮಾನ್‌ಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ. ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಸಿಯಾಬ್‌ನ ಎದೆಯ ಎಡಭಾಗಕ್ಕೆ ಮತ್ತು ರಿಯಾಬ್‌ನ ಬಲ ಮುಂದೋಳಿಗೂ ಇರಿದು ಅವರ ಕೊಲೆಗೂ ಯತ್ನಿಸಿದ್ದಾನೆ.

ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಸುಲೇಮಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ರಿಯಾಬ್ ಮತ್ತು ಸಿಯಾಬ್‌ಗೆ ಚಿಕಿತ್ಸೆ ನಡೆಯುತ್ತಿದೆ.

ದೂರಿನ ಮೇರೆಗೆ ಅಪರಾಧ ಸಂಖ್ಯೆ 41/2025 ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023 ರ ಕಲಂ 103(1), 109(1), 118(1), 351(2), 351(3), ಮತ್ತು 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Ads on article

Advertise in articles 1

advertising articles 2

Advertise under the article