ಗುದ ನೋವಿನಿಂದ ಬಳಲುತ್ತಿದ್ದ ಮಂಗ ಪಶು ಆಸ್ಪತ್ರೆಗೆ ಬಂತು: ಡಾಕ್ಟರ್ಗೆ ತೋರಿಸಿ ನೋವಿಗೆ ಔಷಧಿ ಪಡೆದು ಹೋಯಿತು
Thursday, May 22, 2025
ಬಾಗಲಕೋಟೆ: ಮಂಗಗಳು ಮನುಷ್ಯರಷ್ಟೇ ಬುದ್ಧಿ ಇರುವ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವುಗಳಿಗೆ ಮಾತನಾಡಲಷ್ಟೇ ಬರುವುದಿಲ್ಲ ಉಳಿದಂತೆ ಅವುಗಳು, ಮನಷ್ಯನಂತೆ ಯೋಚಿಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. ಅಲ್ಲದೆ, ಮನುಷ್ಯನೊಂದಿಗೆ ತನ್ನದೇ ಶೈಲಿಯಲ್ಲಿ ಸಂವಹನ ನಡೆಸುವ ಕಲೆಯನ್ನು ಸಹ ಮಂಗಗಳು ಹೊಂದಿವೆ.
ಅಂದಹಾಗೆ, ಮನುಷ್ಯ ತನಗೆ ಏನಾದರೂ ಆರೋಗ್ಯ ಸಮಸ್ಯೆಯಾದಲ್ಲಿ ಆಸ್ಪತ್ರೆಗೆ ಹೋಗುತ್ತಾನೆ. ಆದರೆ, ಮೂಕ ಪ್ರಾಣಿಗಳಿಗೆ ಸಮಸ್ಯೆಯಾದರೆ ಎಲ್ಲಿಗೆ ಹೋಗಬೇಕು? ಪಶುವೈದ್ಯಕೀಯ ಆಸ್ಪತ್ರೆಗಳ ಬಗ್ಗೆ ಅದರ ಬಗ್ಗೆ ಅರಿವು ಇರುವುದಿಲ್ಲ. ಸಾಕು ಪ್ರಾಣಿಗಳಾದರೆ, ಅದರ ಮಾಲೀಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ, ಸ್ವತಂತ್ರವಾಗಿ ಅಡ್ಡಾಡಿಕೊಂಡಿರುವ ಜೀವಿಗಳು ಎಲ್ಲಿಗೆ ಹೋಗಬೇಕು? ಆದರೆ, ಇಲ್ಲೊಂದು ಕೋತಿ ತಾನಾಗೇ ಪಶು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದೆ.
ಹೌದು ಗುದ ನೋವು ಸಹಿಸಲಾರದೇ ಮಂಗವೊಂದು ತಾನಾಗಿಯೇ ಪಶು ಆಸ್ಪತ್ರೆಗೆ ಆಗಮಿಸಿದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ.
ಗೂಡೂರಿನ ಎಸ್ ಸಿ ಪಶು ಆಸ್ಪತ್ರೆಗೆ ಬಂದ ಮಂಗವೊಂದು, ಪಶು ವೈದ್ಯರಿಗೆ ತನ್ನ ಗುದದ್ವಾರದ ಕಡೆಗೆ ಕೈ ತೋರಿಸಿ, ತನ್ನ ಸಮಸ್ಯೆಯನ್ನು ಹೇಳಿಕೊಂಡಿದೆ. ತನಗಾದ ವೇದನೆಯನ್ನು ಕೈ ಸನ್ನೆ ಮೂಲಕ ಮಂಗ ತೋರಿಸಿದ್ದಾನೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ಪಶುವೈದ್ಯ ಜಿ.ಜಿ. ಬಿಲ್ಲೋರ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯನ್ನು ಪಡೆದ ಮಂಗ ನಂತರ ಅಲ್ಲಿಂದ ಹೊರಟು ಹೋಯಿತು. ಈ ದೃಶ್ಯವನ್ನು ಕಂಡ ಸ್ಥಳೀಯರು ಹುಬ್ಬೇರಿಸಿದ್ದು, ಕೋತಿಯ ಬುದ್ದಿವಂತಿಕೆಯನ್ನು ಕೊಂಡಾಡಿದ್ದಾರೆ.