Putturu: ಚಿಕ್ಕಮ್ಮನ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ಅರೆಸ್ಟ್


ಮಂಗಳೂರು: ದ.ಕ.ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಮಹಿಳೆಯೊಬ್ಬರನ್ನು ಕೊಲೆಗೈದ ಮಹಿಳೆಯ ಸಹೋದರಿಯ ಪುತ್ರ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


 ರವಿವಾರ ತಡರಾತ್ರಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ.

 ಹತ್ಯೆಯಾದ  ಮಹಿಳೆ ಅವರ ಮನೆಗೆ ಆದಿತ್ಯವಾರ ಬಂದಿದ್ದ ಅವರ ಸಹೋದರಿಯ ಪುತ್ರ, ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಅಂದು ರಾತ್ರಿ ಅಲ್ಲಿಯೇ ಮಲಗಿದ್ದ. ತಡರಾತ್ರಿ ವೇಳೆ ಅಪ್ರಾಪ್ತನು ಮಹಿಳೆ ಮಲಗಿದಲ್ಲಿಗೆ ಹೋಗಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ. ಇದಕ್ಕೆ ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆರೋಪಿ ಬಾಲಕ ಅವರ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಬಾಲಕ ಬಾಯಿ ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಘಟನೆ ಬಗ್ಗೆ ಹೇಮಾವತಿಯವರ ಪತಿ ವಿಠಲ ಪೈ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. "ನನ್ನ ಪತ್ನಿ ಆಕೆಯ ತವರು ಮನೆಯಲ್ಲಿ ವಾಸ್ತವ್ಯವಿದ್ದು, ಆಕೆ ಮಲಗಿದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತನಗೆ ಮಾಹಿತಿ ಬಂದಿದೆ. ಆದರೆ ಪತ್ನಿಯ ಮೃತ ದೇಹದಲ್ಲಿ ಗಾಯದ ಗುರುತು ಕಂಡಿದೆ. ಜೂ. 16ರಂದು ರಾತ್ರಿ ಪತ್ನಿಯ ಸಹೋದರಿಯ ಪುತ್ರ ಪತ್ನಿಯ ಮನೆಗೆ ಬಂದಿದ್ದಾನೆ‌. ರಾತ್ರಿ ಪತ್ನಿಯ ತಾಯಿ, ಪತ್ನಿಯ ಸಹೋದರಿಯ ಪುತ್ರ ಮತ್ತು ಪತ್ನಿ ಊಟ ಮಾಡಿ ಮಲಗಿದ್ದಾರೆ. ಆ ಬಳಿಕ ರಾತ್ರಿಯಿಂದ ಜೂ.17ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದಿರುವ ಅನುಮಾನ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಮೃತರ ಪತಿ ವಿಠಲ ಪೈ ಅವರ ದೂರಿನನ್ವಯ ಆರೋಪಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆತ ತಾನೇ ಹತ್ಯೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಹೀಗಾಗಿ ಅಪ್ರಾಪ್ತ ಬಾಲಕನನ್ನು ಬಂಧಿಸಿ ಆತನ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ.

ಬಾಲಕನನ್ನು ಬಾಲಪರಾಧ ಕೋರ್ಟ್ ಗೆ ಹಾಜರುಪಡಿಸಲಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu