ಮಂಗಳೂರಿನವರು ಹೀಗೆ ಮಾಡಿದರೆ 2 ವರ್ಷದಲ್ಲಿ ನೀರಿನ ಸಮಸ್ಯೆ ಪರಿಹಾರ- ಜಲತಜ್ಞ ಶ್ರೀಪಡ್ರೆ ಅವರ ಪೂರ್ತಿ ವಿಡಿಯೋ ನೋಡಿ
ಮಂಗಳೂರು: ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಮಳೆ ನೀರು ಕೊಯ್ಲು ಕೇಂದ್ರ ಸ್ಥಾಪಿಸುವ ಅಗತ್ಯವಿದೆ - ಶ್ರೀ ಪಡ್ರೆ
ಮಂಗಳೂರು: ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಮಳೆ ನೀರು ಕೊಯ್ಲಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕೇಂದ್ರ ಸ್ಥಾಪಿಸುವ ತುರ್ತು ಅಗತ್ಯವಿದೆ. ಇಲ್ಲಿ ಮಳೆ ನೀರು ಕೊಯ್ಲಿನ ಪ್ರಾತ್ಯಕ್ಷಿಕಾ ಮಾದರಿ, ಈ ಕ್ಷೇತ್ರದ ಸಾಧಕರ ವಿವರ, ದೂರವಾಣಿ ಸಂಖ್ಯೆ ಹಾಗೂ ಈ ಬಗ್ಗೆ ಮಾರ್ಗದರ್ಶಕರು ಇಲ್ಲಿ ಇರಬೇಕಾಗುತ್ತದೆ ಎಂದು ಮಳೆನೀರು ಕೊಯ್ಲು ತಜ್ಞ ಶ್ರೀ ಪಡ್ರೆ ಹೇಳಿದರು.
ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಸರಿಸುಮಾರು 3,500 ಮಿ.ಮೀ. ಮಳೆ ಬೀಳುವ ದ.ಕ.ಜಿಲ್ಲೆಯ ನಾವು ಬೇಸಿಗೆಯಲ್ಲಿ ನೀರಿಲ್ಲವೆಂದು ತತ್ತರಿಸುವುದು ನಮಗೆ ಮಳೆ ನೀರು ಇಂಗಿಸುವಿಕೆಯ ಅರಿವಿನ ಕೊರತೆಯೇ ಕಾರಣ. ನಾವು ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಮಳೆಭಾಗ್ಯ ಇರುವ ಪ್ರದೇಶದವರಾದ ನಾವು 100 - 200 ಮಿ.ಮೀ. ಮಳೆ ನೀರಿನಲ್ಲಿ ಯಾವ ರೀತಿ ಬದುಕುತ್ತಾರೆ ಎಂಬುದರ ಬಗ್ಗೆ ನಾವು ಪ್ರಶ್ನಿಸುವ ಅಗತ್ಯವಿದೆ ಎಂದರು.
ಮಳೆ ಹೆಚ್ಚು ಬಂದರೆ ನೀರಿನ ಕೊರತೆಯಿರುವುದಿಲ್ಲ ಎಂಬ ನಮ್ಮ ಮಾನಸಿಕ ಭ್ರಮೆಯಿಂದ ಮೊದಲು ನಾವು ಹೊರಬರಬೇಕು. ನೀರಿನ ಬಳಕೆ, ಬೋರ್ ವೆಲ್ ಗಳ ಪರಿಸ್ಥಿತಿಯನ್ನು ನಾವು ಯೋಚಿಸಬೇಕು. ಆದ್ದರಿಂದ ಮಳೆ ಎಷ್ಟು ಬಂದಿದೆ ಅನ್ನುವುದಕ್ಕಿಂತಲೂ ನಾವೆಷ್ಟು ನೀರು ಶೇಖರವಾಗುವ ಪ್ರಯತ್ನ ಮಾಡಿದ್ದೇವೆ ಅನ್ನೋದು ಮುಖ್ಯವಾಗುತ್ತದೆ. ಬೋರ್ ವೆಲ್ ಗಳು ತೋಡುವುದಕ್ಕಿಂತ ತೆರೆದ ಬಾವಿಗಳನ್ನು ತೋಡುವುದು ಉತ್ತಮ. ಅಲ್ಲದೆ ಮಳೆಗಾಲದ ಸಂದರ್ಭ ಬಾವಿಗೆ ಮಳೆ ನೀರು ಕೊಯ್ಲಿನ ಮೂಲಕ ಬಾವಿಯಲ್ಲಿ ನೀರು ಶೇಖರಿಸುವ ಕಾರ್ಯವಾಗಬೇಕು ಎಂದರು.
ಜೊತೆಗೆ ಮಳೆಗಾಲದಲ್ಲಿ ನೀರು ಅನಗತ್ಯ ಪೋಲಾಗಿ ಸಮುದ್ರ ಪಾಲಾಗುವುದನ್ನು ತಡೆಯಬೇಕು. ಅದಕ್ಕಾಗಿ ಪ್ರತಿ ಮನೆಮನೆಗಳಲ್ಲೂ ನೀರು ಇಂಗಿಸುವಿಕೆಯ ಕಾರ್ಯ ಆಗಬೇಕು. ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಮದಕಗಳಿವೆ ಇವು ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿ. ಅಲ್ಲದೆ ಕಟ್ಟಗಳ ಮೂಲಕ, ಟಾಂಕಾಗಳ ಮೂಲಕ ಜಲಸಂಪತ್ತನ್ನು ಶೇಖರಿಸುವ ಕಾರ್ಯ ಆಗಬೇಕಿದೆ ಎಂದು ಶ್ರೀ ಪಡ್ರೆ ಹೇಳಿದರು.