ಕೊಯಿಕ್ಕೋಡ್: ಬೆಳ್ಳಂಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲು ಪೊಲೀಸ್ ಠಾಣೆಯೊಳಗೆ ಬರುತ್ತಿದ್ದಂತೆ ಸಬ್ ಇನ್ಸ್ ಪೆಕ್ಟರ್ ಓರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಕೇರಳದ ಥಾಮರಸ್ಸೆರೆ ಠಾಣೆಯಲ್ಲಿ ನಡೆದಿದೆ.
ಥಾಮರಸ್ಸೆರೆ ಠಾಣೆಯ ಪಿಎಸ್ಐ ಸನೋಜ್ (37) ಮೃತಪಟ್ಟವರು.
ಸನೋಜ್ ಅವರು ಕರ್ತವ್ಯ ನಿಮಿತ್ತ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ ಠಾಣೆಯೊಳಗೆ ಕಾಲಿಡುತ್ತಿದ್ದಂತೆಯೇ ಎದೆ ನೋವಿನಿಂದ ಕುಸಿದು ಬಿದ್ದಿದ್ದಾರೆ. ಅವರು ಕುಸಿದು ಬಿದ್ದಿದ್ದನ್ನು ಗಮನಿಸಿದ ಠಾಣಾ ಸಿಬ್ಬಂದಿ ತಕ್ಷಣ ಅವರನ್ನು ಕೊಯಿಕ್ಕೋಡ್ ಮೆಡಿಕಲ್ ಕಾಲೇಜು ಹಾಸ್ಪಿಟಲ್‌ಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸನೋಜ್ ಕೊನೆಯುಸಿರೆಳೆದಿದ್ದಾರೆ.
ಸನೋಜ್ ಸಾವಿನ ಸುದ್ದಿ ಕೇಳಿ ಅವರ ಕುಟುಂಬಕ್ಕೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ . ಸಹೋದ್ಯೋಗಿಯೊಬ್ಬರನ್ನು ಕಳೆದುಕೊಂಡ ಸಿಬ್ಬಂದಿ ಸಹ ಕಂಬನಿ ಮಿಡಿದಿದ್ದಾರೆ.