Mangaluru: ದೀಪಾವಳಿ ದಿನವೇ ಮಂಗಳೂರಿನಲ್ಲಿ ‌ನಡೆಯಿತು ಭೀಕರ ಹತ್ಯೆ: ತಂದೆ - ಮಗ ಅಂದರ್

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ತಂದೆ - ಮಗ ವ್ಯಕ್ತಿಯೋರ್ವರನ್ನು ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ನಿನ್ನೆ ತಡರಾತ್ರಿ ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.‌ 

ಮಂಗಳೂರು ಕಾರ್ ಸ್ಟ್ರೀಟ್ ಮಹಮ್ಮಾಯಾ ರಸ್ತೆಯಲ್ಲಿರುವ ವೀರ ವೆಂಕಟೇಶ ಅಪಾರ್ಟ್‌ಮೆಂಟ್ ನಿವಾಸಿ ವಿನಾಯಕ ಕಾಮತ್ ಮೃತಪಟ್ಟವರು. ಅದೇ ಅಪಾರ್ಟ್‌ಮೆಂಟ್ ನಿವಾಸಿಗಳಾದ ತಂದೆ ಕೃಷ್ಣಾನಂದ ಕಿಣಿ ಹಾಗೂ ಮಗ ಅವಿನಾಶ್ ಕಿಣಿ  ಕೊಲೆ ಆರೋಪಿಗಳು. 

ಕೊಲೆಯಾದ ವಿನಾಯಕ ಕಾಮತ್
ವಿನಾಯಕ ಕಾಮತ್



ಆರೋಪಿ ಕೃಷ್ಣಾನಂದ ಕಿಣಿಗೆ ವಿನಾಯಕ ಕಾಮತ್ ಮೇಲೆ ವೈಯುಕ್ತಿಕ ದ್ವೇಷವಿತ್ತು. 4-5 ವರ್ಷಗಳ ಹಿಂದೆ ಇದೇ ವೀರ ವೆಂಕಟೇಶ ಅಪಾರ್ಟ್‌ಮೆಂಟ್ ಗೇಟ್ ಮುಂಭಾಗ ಮಂಗಳೂರು ಮನಪಾ ಸಿಮೆಂಟ್ ಹಾಕಿದ್ದರು. ಇದರ ಬೇರೆಯವರ ಮೇಲೆ ಕಾರು ಹೋಗುವ ವಿಚಾರದಲ್ಲಿ ಕೃಷ್ಣಾನಂದ ಕಿಣಿಯವರು ವಿನಾಯಕ ಕಾಮತ್ ಅವರೊಂದಿಗೆ ದ್ವೇಷ ಹೊಂದಿದ್ದರು. ಇದೇ ಕಾರಣಕ್ಕೆ ಜಗಳ ತೆಗೆದು ಕೊಲೆಗೈದಿದ್ದಾರೆಂದು ಮೃತ ವಿನಾಯಕ ಕಾಮತ್ ಪತ್ನಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಎಲ್ಲರೂ ದೀಪಾವಳಿ ಆಚರಿಸುತ್ತಿದ್ದ ಸಂದರ್ಭ ವಿನಾಯಕ ಕಾಮತ್ ಅಪಾರ್ಟ್‌ಮೆಂಟ್ ಕೆಳಗೆ ಹೋಗಿದ್ದಾರೆ. ಈ ಸಂದರ್ಭ ಪಾರ್ಕಿಂಗ್ ಸ್ಥಳದಲ್ಲಿದ್ದ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರೊಂದಿಗೆ ವಾಗ್ವಾದ ಬೆಳೆಸಿದ್ದಾರೆ. ಇವರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ ಮೂವರೂ ಹೊಡೆದಾಡಿಕೊಂಡಿದ್ದಾರೆ. ಆಗ ಕೃಷ್ಣಾನಂದ ಕಿಣಿ ತಮ್ಮ ಕೈಯ್ಯಲ್ಲಿದ್ದ ಚೂರಿಯಿಂದ ವಿನಾಯಕ ಕಾಮತ್ ಅವರ ಎದೆಗೆ ಚುಚ್ಚಿದ್ದಾರೆ‌. ಈ ಸಂದರ್ಭ ಅವಿನಾಶ್ ಕಿಣಿ ಕೂಡಾ ವಿನಾಯಕ ಕಾಮತ್ ಅವರನ್ನು ದೂಷಿಸುತ್ತಾ ಕೊಲೆಗೆ ಸಹಕರಿಸಿದ್ದಾನೆ ಎಂದು ದೂರಿನಲ್ಲಿ‌ ತಿಳಿಸಲಾಗಿದೆ.




ತಕ್ಷಣ ವಿನಾಯಕ ಕಾಮತ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 1.40ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಆರೋಪಿಗಳಾದ ಕೃಷ್ಣಾನಂದ ಕಿಣಿ ಹಾಗೂ  ಅವಿನಾಶ್ ಕಿಣಿ



ಸ್ಥಳಕ್ಕೆ ದೌಢಾಯಿದಿರುವ ಬಂದರು ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

BREAKING NEWS
Loading latest news...
Join our WhatsApp Channel Powered By : Online Pudu