ಬರಹ: ಭರತ್ ರಾಜ್ ಸೊರಕೆ
ಕೋವಿಡ್ ಬಂದು ಎಲ್ಲ ಮುಗಿದೋಯ್ತು. ಇನ್ನು ಕೆಲಸದ ಗ್ಯಾರಂಟಿ ಇಲ್ಲ, ಕೂತು ಉಣ್ಣೋಕಾಗುತ್ತಾ ? ಛೆ! ಏನಾದ್ರು ಮಾಡ್ಬೇಕಲ್ಲ ಎಂಬ ಮಂಡೆಬೆಚ್ಚದಲ್ಲೇ ಇದ್ದಾಗ ಕಂಡಿದ್ದು ಜೇನು ಕೃಷಿ ತರಬೇತಿ ಇದೆ ಎಂಬ ಪ್ರಕಟನೆ.
ತರಬೇತಿ ಆರಂಭವಾಗುವ ಹೊತ್ತಿಗೆ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ಬಿಡುವು ಆಗ್ತಾ, ಆಗ್ತಾ ಮಾಸ್ಕ್ ಮೂಗಿನಿಂದ ಬಾಯಿಗೆ ಇಳಿದಿತ್ತು. ಆದ್ರೂ ಮನದೊಳಗೆ ಹೆದರಿಕೆ. ಪೇಪರ್ ತಗೊಳ್ಳುವವರ ಸಂಖ್ಯೆ ಕಮ್ಮಿಯಾಗಿದೆ. ಆಫೀಸಿಗೆ ಡೈಲಿ ಹೋಗ್ಲಿಕ್ಕೆ ಇಲ್ಲ, ಎರಡು ದಿನಕ್ಕೊಮ್ಮೆ ಕೆಲಸ. ಹೋದರೂ ಕೆಲಸ ಬೇಕಲ್ಲ. ಯಾವಾಗ ಒಳಗೆ ಕರೆಯುತ್ತಾರೋ ಎಂಬ ಆತಂಕ.
ಹೀಗಿರುವಾಗ ಕಡಬದಲ್ಲಿ ತರಬೇತಿ ಇದೆ ಎಂದು ತೋಟಗಾರಿಕೆ ಇಲಾಖೆಯಿಂದ ಬಂತು ಫೋನ್.
'ಜೇನು ಸಾಕಾಣಿಕೆ ಎಂತ ಸುಮ್ನೆ, ಪೆಟ್ಟಿಗೆ ಇಟ್ಟರೆ ಆಯ್ತು. ನೊಣ ಕಚ್ಚದ ಹಾಗೆ ತೆಗಿಲಿಕ್ಕೆ ಸ್ವಲ್ಪ ಗೊತ್ತಿದ್ರೆ ಮುಗಿಯಿತು' ಅಂತ ತಲೆಯಲ್ಲಿ ತುಂಬಿಕೊಂಡಿದ್ದ ನನಗೆ- ಕಲಿತಷ್ಟು ಮುಗಿಯದ, ಅನುಭವದಿಂದ ತಿಳಿಯುವ ಬಹಳಷ್ಟು ವಿಷಯಗಳಿವೆ ಎಂಬ ಸತ್ಯ ಅರಿವಾದದ್ದು ತರಬೇತಿಯಲ್ಲಿ.
ಹುಳುಗಳ ಒಗ್ಗಟ್ಟು, ಮಧು ಸಂಗ್ರಹ, ರಾಣಿ ಮತ್ತು ಕೆಲಸಗಾರ ಹುಳುಗಳ ಕಾರ್ಯವೈಖರಿ ಕುತೂಹಲವೆನಿಸಿತು. 2000 ಜೇನುಪೆಟ್ಟಿಗೆ ಹೊಂದಿದ್ದ ಯುವಕ ಮನೋಹರ್ ಬೆಟ್ಟಂಪಾಡಿ ಪ್ರೇರಣೆಯಾದರು.
ಸರಕಾರದಿಂದ ಸಬ್ಸಿಡಿಯಲ್ಲಿ ಸಿಕ್ಕಿದ್ದು ಎರಡು ಪೆಟ್ಟಿಗೆ. ನಿತ್ಯ ಬೆಳಗ್ಗೆದ್ದು ಗೂಡಿನ ಬಾಗಿಲ ಬಳಿ ನಿಂತು ನೊಣಗಳ ಚಟುವಟಿಕೆ ನೋಡುವುದು ಖುಷಿ. ಆರಂಭದಲ್ಲಿ ಎರಿ ತೆಗೆದು ನೋಡುವಾಗ ನಾಲ್ಕು ನೊಣಗಳು ಕುಟ್ಟಿ ಜ್ವರ, ಮೈ ಕೈ ನೋವು ಶುರುವಾಗಿ ಜೇನಿನ ಸಹವಾಸ ಸಾಕಪ್ಪಾ ಸಾಕು ಅನ್ನಿಸಿದ್ದಿದೆ. ಆಮೇಲೆ ದಿನ ಕಳೆದಂತೆ ನೊಣಗಳಿಗೂ ನನಗೂ ದೋಸ್ತಿಯಾಯಿತು. ಕಚ್ಚುವುದು ಕಡಿಮೆಯಾಯಿತು. ಕಚ್ಚಿದರೂ ದೊಡ್ಡ ಸಂಗತಿ ಎನಿಸಲಿಲ್ಲ.
ಎರಡು ಬಾರಿ ಕುಟುಂಬ ಪಾಲು ಮಾಡಲು ಹೋಗಿ ಸೋತೆ. ಮಾಡಿದ ತಪ್ಪುಗಳಿಂದ ಬಹಳಷ್ಟು ಕಲಿತೆ.
ಅಂದಹಾಗೆ, ಇವತ್ತು ಮೊದಲ ಫಸಲು ಸಂಗ್ರಹಿಸಿದ ಸಂಭ್ರಮ. ಇಷ್ಟು ದಿನ ಜತನದಿಂದ ನೋಡಿಕೊಂಡು ಬಂದ ಒಂದು ಪೆಟ್ಟಿಗೆಯ 5 ಫ್ರೇಮ್ ನಿಂದ 2 ಕೆ. ಜಿ. ಜೇನು ಸಿಕ್ಕಿದೆ. ಜೇನಿನ ಸಹವಾಸದಲ್ಲಿ ಖುಷಿ ಇದೆ.
ಹೇಳ್ತಿದ್ದೇನೆ ಕೇಳಿ-
ನಂಗೆ ಜೇನು ಬೇಕಿತ್ತು ಅಂತ ಕೇಳ್ಬೇಡಿ. ಇವತ್ತು ಸಂಗ್ರಹಿಸಿದ್ದು ಈಗಾಗ್ಲೆ ಬುಕ್ ಆಗಿದೆ. ಮುಂದಿನ ಕೊಯ್ಲಲ್ಲಿ ಕೊಡೋಣ. ನಮಸ್ಕಾರ
ಕೃಪೆ:ಎಫ್‌ಬಿ
