ಮಂಗಳೂರು: ಮುಲ್ಕಿ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಹಣ ದೋಚಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಸೆರೆಹಿಡಿದು, ಆತನ ವಶದಲ್ಲಿದ್ದ ಕಳವು ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯ್ಯಂಗೇರಿಯ ರವಿಕುಮಾರ ಅಲಿಯಾಸ್ ರವಿ ಹೆಚ್.ಜಿ. (20) ಬಂಧಿತ ಯುವಕ.
ಘಟನಾ ವಿವರ: ಆಗಸ್ಟ್ 18ರ ಮಧ್ಯರಾತ್ರಿಯ ವೇಳೆ ಮುಲ್ಕಿಯ ಚಂದ್ರಮೌಳೇಶ್ವರ ದೇವಸ್ಥಾನದ ಮೇಲ್ಛಾವಣಿಯ ಜಾಲರಿಯನ್ನು ಸರಿಸಿ ಒಳನುಗ್ಗಿದ್ದ ಆರೋಪಿ, ಸಿಸಿಟಿವಿ ಕ್ಯಾಮೆರಾದ ದಿಕ್ಕನ್ನು ಬದಲಿಸಿ ಕಾಣಿಕೆ ಪೆಟ್ಟಿಗೆಯ ಬೀಗ ಮುರಿದು ಹಣ ಕಳವು ಮಾಡಿದ್ದನು. ಈ ಬಗ್ಗೆ ತನಿಖೆ ನಡೆಸಿದ ಮುಲ್ಕಿ ಠಾಣಾ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಯ ತಂಡವು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಬಂಧಿತನ ಬಳಿಯಿದ್ದ ಕಳವು ಮಾಡಲಾದ 2,195 ರೂ. ನಗದನ್ನು ಅಮಾನತುಪಡಿಸಿಕೊಂಡು, ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಹಳೆಯ ಕೇಸ್‌ಗಳು: ಬಂಧಿತ ಆರೋಪಿ ರವಿಕುಮಾರ ಮೇಲೆ ಈ ಹಿಂದೆ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಒಟ್ಟು 5 ಅಪರಾಧ ಪ್ರಕರಣಗಳು (ಕ್ರೈಂ ನಂ. 44/2024, 148/2024, 365/2024, 386/2024 ಹಾಗೂ 354/2024) ದಾಖಲಾಗಿವೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.