ಮಂಗಳೂರು: ಶಿರಾಡಿ ಘಾಟ್‌ನಲ್ಲಿ ಭಾರೀ ಗುಡ್ಡಕುಸಿತ - ಎಲ್ಲಾ ವಾಹನಗಳ ಸಂಚಾರ ನಿರ್ಬಂಧ‌, ಮಣ್ಣಿನಡಿ ಸಿಲುಕಿದ ವಾಹನಗಳು


ಮಂಗಳೂರು: ಮಂಗಳೂರು –ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರದ ಶಿರಾಡಿ ಘಾಟ್ ದೊಡ್ಡತೆಪ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವಾರು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿದೆ. 

ಗುಡ್ಡಕುಸಿತವಾದ ಪರಿಣಾಮ ಎರಡು ಕಾರು, ಒಂದು ಟ್ಯಾಂಕ‌ರ್ ಸೇರಿ ಆರು ವಾಹನಗಳು ಮಣ್ಣನಡಿ ಸಿಲುಕಿವೆ ಎನ್ನಲಾಗಿದೆ. ಸದ್ಯ ಶಿರಾಡಿ ಘಾಟ್ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ಬರುತ್ತಿರುವ ವಾಹನಗಳನ್ನು  ಪೊಲೀಸರು ಗುಂಡ್ಯದಲ್ಲಿಯೇ ತಡೆಯುತ್ತಿದ್ದಾರೆ.


ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಳೆದ 15ದಿನಗಳಿಂದ ಮಣ್ಣು ಕುಸಿಯುತ್ತಿದ್ದು, ಮಂಗಳವಾರ ಮತ್ತೆ ಮಣ್ಣು ಕುಸಿದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ.