ಮಂಗಳೂರು: ಅಪ್ರಾಪ್ತೆಯ ಪ್ರಚೋದನೆಯಿಂದ ಯುವಕನಿಗೆ ಮಾರಣಾಂತಿಕ ಹಲ್ಲೆ - ನಾಲ್ವರು ಅರೆಸ್ಟ್


ಮಂಗಳೂರು: ಅಪ್ರಾಪ್ತೆ ನೀಡಿರುವ ಪ್ರಚೋದನೆಯಿಂದ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ ಆತನ ಇಬ್ಬರು ಗೆಳೆಯರಿಗೆ ಹಲ್ಲೆ ನಡೆಸಿರುವ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ಇದೀಗ ಪೊಲೀಸರು ಘಟನೆ ನಡೆದ ಕೇವಲ 12 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.

ಮಂಗಳೂರು ಕದ್ರಿ ಮಲ್ಲಿಕಟ್ಟೆ ಶಿವಭಾಗ್ ನಿವಾಸಿ ಮಹಮ್ಮದ್ ತುಫೈಲ್(20), ನೀರುಮಾರ್ಗ ಬೈತುರ್ಲಿ ನಿವಾಸಿಗಳಾದ ಮಹಮ್ಮದ್ ಅಫ್ರೀದ್(19), ಮುಕ್ಷುದ್ ಸಾಗ್(21), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್(19) ಬಂಧಿತ ಆರೋಪಿಗಳು.

ಕಿನ್ನಿಗೋಳಿಯ ಏಳಿಂಜೆ ನಿವಾಸಿ ಅಪ್ರಾಪ್ತೆಯೊಬ್ಬಳಿಗೆ ನಿದೀಶ್ ಎಂಬ ಯುವಕ ಇನ್ ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದಾನೆ. ಆತನೊಂದಿಗೆ ಮಾತನಾಡಲು ಇದೆಯೆಂದು ಜೂ.16ರ ರಾತ್ರಿ 9.45ರ ವೇಳೆಗೆ ಆಕೆ ನಗರದ ಅಲೋಶಿಯಸ್ ಕಾಲೇಜಿನ ಬಳಿ ಕರೆದಿದ್ದಾಳೆ. ಅದರಂತೆ ನಿದೀಶ್ ತನ್ನಿಬ್ಬರು ಗೆಳೆಯರೊಂದಿಗೆ ಆಕೆ ಹೇಳಿದ ಸ್ಥಳಕ್ಕೆ ಬಂದಿದ್ದಾನೆ‌. ಆದರೆ ಹಠಾತ್‌ ಪ್ರಚೋದನೆಯೆಂಬಂತೆ ಆಕೆ ತನ್ನ ಜೊತೆಗಾರೊಂದಿಗೆ ನಿದೀಶ್ ನೊಂದಿಗೆ ಜಗಳವಾಡಿದ್ದಾಳೆ. 

ಅಲ್ಲದೆ ಆರೋಪಿಗಳು ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಎದೆಗೆ ಇರಿದಿದ್ದಾರೆ. ಅಲ್ಲದೆ ಆತನ ಗೆಳೆಯರಿಗೂ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಕುಡುಪು ಬೈತುರ್ಲಿ ಬಳಿಯ ವಿಶ್ವಾಸ್ ಹೆರಿಟೇಜ್ ಫ್ಲ್ಯಾಟ್ ಗೆ ನಿನ್ನೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕಿಯನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ‌.
BREAKING NEWS
Loading latest news...
Join our WhatsApp Channel Powered By : Online Pudu