ಕುದಿಯುತ್ತಿದ್ದ ರಸಂ ಪಾತ್ರೆಗೆ ಬಿದ್ದು ಯುವಕ ಗಂಭೀರ ಗಾಯಗೊಂಡು ಮೃತ್ಯು



ತಮಿಳುನಾಡು: ಚೆನ್ನೈನ ತಿರುವಳ್ಳುವರ್ ಜಿಲ್ಲೆಯಲ್ಲಿ ವಿವಾಹ ಸಮಾರಂಭದ ಅಡುಗೆ ಮನೆಯಲ್ಲಿ ಆಕಸ್ಮಿಕವಾಗಿ ಕುದಿಯುತ್ತಿದ್ದ ರಸಂ ಪಾತ್ರೆಗೆ ಬಿದ್ದು 21 ವರ್ಷದ ಯುವಕನೋರ್ವನು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟ ಯುವಕ ಕಾಲೇಜು ವಿದ್ಯಾರ್ಥಿಯಾಗಿದ್ದನು. ಆಹಾರ ಪೂರೈಕೆ ಸಂಸ್ಥೆಯೊಂದರಲ್ಲಿ ಅರೆಕಾಲಿಕ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ವಾರ ಯುವಕನು ವಿವಾಹ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಆಹಾರ ಪೂರೈಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಯುವಕನು ಅತಿಥಿಗಳಿಗೆ ಬಡಿಸಲು ಸಿದ್ಧಪಡಿಸಲಾಗುತ್ತಿದ್ದ ಕುದಿಯುವ ರಸಂ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ತೀವ್ರವಾಗಿ  ಗಾಯಗಳಿಗೊಂಡಿದ್ದ ಯುವಕನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತಪಟ್ಟಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.