-->
ಕೊಟ್ಟ ಹಣ ಹಿಂದಿರುಗಿಸಲಿಲ್ಲವೆಂದು ವ್ಯಕ್ತಿಯ ನಗ್ನ ಮಾಡಿ ನಾಗಿಣಿ ಡ್ಯಾನ್ಸ್ ಮಾಡಿಸಿದ ಜೋತಿಷಿ ಹಾಗೂ ಸಹಚರರು!

ಕೊಟ್ಟ ಹಣ ಹಿಂದಿರುಗಿಸಲಿಲ್ಲವೆಂದು ವ್ಯಕ್ತಿಯ ನಗ್ನ ಮಾಡಿ ನಾಗಿಣಿ ಡ್ಯಾನ್ಸ್ ಮಾಡಿಸಿದ ಜೋತಿಷಿ ಹಾಗೂ ಸಹಚರರು!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ತೆಗೆದುಕೊಂಡ ಹಣ ವಾಪಸ್ ನೀಡಿಲ್ಲವೆಂದು  ವ್ಯಕ್ತಿಯೋರ್ವನನ್ನು ತಂಡವೊಂದು ಅಪಹರಿಸಿ ವಿವಸ್ತ್ರಗೊಳಿಸಿ ನಾಗಿಣಿ ನೃತ್ಯ ಮಾಡಿಸಿರುವ ಹೀನ ಕೃತ್ಯವೊಂದು ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. 

ಜ್ಯೋತಿಷಿ ಹಾಗೂ ಆತನ ಸ್ನೇಹಿತ ಸೇರಿ ಕ್ಯಾಬ್​ ಚಾಲಕರೊಬ್ಬರನ್ನು ಅಪಹರಣ ಮಾಡಿ ನಗ್ನವಾಗಿಸಿ ನಾಗಿಣಿ ನೃತ್ಯ ಮಾಡಿಸಿದ್ದಾರೆ. ಅಲ್ಲದೆ ಆ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದಾರೆ. ಪತಿಯ ಮೇಲಾಗಿರುವ ಕಿರುಕುಳದ ವೀಡಿಯೋವನ್ನು ನೋಡಿ ಪತ್ನಿಯೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಕೆ.ಆರ್​.ಪುರದ ಸತೀಶ್​ ಎಂಬಾತ ದೌರ್ಜನ್ಯಕ್ಕೆ ಒಳಗಾದ ಕ್ಯಾಬ್​ ಚಾಲಕ. ಈತನ ಪತ್ನಿ ನೀಡಿರುವ ದೂರಿನನ್ವಯ ಆರೋಪಿ ದಯಾಳ್​ ಮಂಜ ಅಲಿಯಾಸ್​ ಪುಲಿ ಮಂಜ ಮತ್ತು ಇತರರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 

ಜ್ಯೋತಿಷ್ಯ ಹೇಳುವ ದಯಾಳ್​ ಮಂಜ ತನಯ ಪರಿಚಿತ ಸತೀಶ್​ಗೆ 2 ಲಕ್ಷ ರೂ. ಸಾಲ ನೀಡಿದ್ದ. ಇದನ್ನು ಆತ ವಾಪಸ್​ ಕೊಟ್ಟಿರಲಿಲ್ಲ. ಪರಿಣಾಮ ಕುಪಿತಗೊಂಡ ದಯಾಳ್​ ಮಂಜ, ಬುದ್ಧಿ ಕಲಿಸಬೇಕೆಂದು ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ಪರಿಚಿತ ಗಣೇಶ್​ ಎಂಬಾತನಿಗೆ ಸತೀಶ್​ನನ್ನು ಕರೆತರುವಂತೆ ಸೂಚಿಸಿದ್ದ. 

ಅದರಂತೆ ಗಣೇಶ್​ ನ.10ರಂದು ಸತೀಶ್​ನನ್ನು ಪುಸಲಾಯಿಸಿ ಮುಳಬಾಗಿಲು ಬಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ದಯಾಳ್​ ಮಂಜ ಮತ್ತು ಆತನ ಸಹಚರರು ಸೇರಿಕೊಂಡು ಸತೀಶ್​ ಮೇಲೆ ಹಲ್ಲೆ ನಡೆಸಿ ನಗ್ನ ಮಾಡಿ ನಾಗಿಣಿ ನೃತ್ಯ ಮಾಡಿಸಿದ್ದಾರೆ. ಇದರ ದೃಶ್ಯವನ್ನು ಆರೋಪಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಸತೀಶ್​ನನ್ನು ಬಿಟ್ಟು ಕಳುಹಿಸಿದ್ದಾರೆ. 

ಈ ವೀಡಿಯೋವನ್ನು ಆರೋಪಿ ದಯಾಳ್​ ಮಂಜ, ತಮ್ಮ ಜನಾಂಗದ ಎಂ. ರಾಮಾಪುರ ಗ್ರಾಮ ಸೇವಕರ ಸಂಘ ಮತ್ತು ಬುಡ್ಗ ಜಂಗಮ ವಾಟ್ಸ್​ಆ್ಯಪ್​ ಗ್ರೂಪ್​ಗೆ ಶೇರ್​ ಮಾಡಿದ್ದ. ಮನೆಗೆ ಬಂದ ಸತೀಶ್​, ಸುಸ್ತಾಗಿದ್ದ. ಆದರೆ, ಕುಟುಂಬ ಸದಸ್ಯರ ಬಳಿ ಯಾವುದೇ ವಿಚಾರವನ್ನು ತಿಳಿಸಿರಲಿಲ್ಲ. ಮಾರನೇ ದಿನಕ್ಕೆ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬೆತ್ತಲೆ ನೃತ್ಯದ ವೀಡಿಯೋ ವೈರಲ್​ ಆಗಿರುವ ವಿಚಾರ ಸತೀಶ್​ ಪತ್ನಿಗೆ ಗೊತ್ತಾಗಿದೆ. ಈ ಬಗ್ಗೆ ಪತಿಯನ್ನು ಪತಿ ವಿಚಾರಿಸಿದಾಗ ಸತ್ಯಾಂಶ ಹೊರ ಬಂದಿದೆ. 

ಈ ಬಗ್ಗೆ ಆಕೆ ಕೆ.ಆರ್​.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಆರೋಪಿ ದಯಾಳ್​ ಮಂಜ  ತನ್ನ ವಿರುದ್ಧ ಎಫ್​​ಐಆರ್​ ದಾಖಲಾಗುತ್ತಿದಂತೆ ದೆಹಲಿಗೆ ಹೋಗಿ ಅಲ್ಲಿಂದ ಅಮೆರಿಕಾಗೆ ಪರಾರಿಯಾಗಿದ್ದಾನೆ. ಜ್ಯೋತಿಷ್ಯ ಹೇಳುತ್ತಿದ್ದ ದಯಾಳ್​ ಮಂಜ, ದೇಶ-ವಿದೇಶಗಳಿಗೂ ಹೋಗಿ ಜ್ಯೋತಿಷ್ಯ ಹೇಳುತ್ತಿದ್ದ. ಇದೀಗ ಆರೋಪಿ ಅಮೆರಿಕಾಗೆ ಹೋಗಿದ್ದು, ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

Ads on article

Advertise in articles 1

advertising articles 2

Advertise under the article