Man killed child | ಮೂಢನಂಬಿಕೆ ತಂದ ಆಪತ್ತು; ಅಣ್ಣನ ಮಗಳನ್ನೇ ಕೊಲೆ ಮಾಡಿ ಬಿಸಾಕಿದ!
ಹೀಗೊಬ್ಬ ಕಿರಾತಕನಿದ್ದಾನೆ. ತನಗೆ ಅಪಶಕುನ ಎಂದು ಭಾವಿಸಿದ ಚಿಕ್ಕಪ್ಪ, ತನ್ನ ಹಿರಿಯ ಸಹೋದರನ ಮಗಳನ್ನೇ ಹರಿತ ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಇದಕ್ಕೆ ಕಾರಣ ಈತನ ಮನಸ್ಸಿನಲ್ಲಿ ಇದ್ದ ಅಂಧಶ್ರದ್ಧೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಅಂಗರೇಕನಹಳ್ಳಿ ನಿವಾಸಿ ಕೃಷ್ಣಮೂರ್ತಿ ಎಂಬವರ ಪುತ್ರಿ ಚಾರ್ವಿಕಾ (೫) ಮೃತ ಬಾಲಕಿ. ಈಕೆಯನ್ನು ಚಿಕ್ಕಪ್ಪ ಶಂಕರ್ ನಿರ್ದಯವಾಗಿ ಹತ್ಯೆ ಮಾಡಿದ್ದಾನೆ.
ಹುಟ್ಟುತ್ತಲೇ ಅಂಗವೈಕಲ್ಯಕ್ಕೆ ಈಡಾಗಿರುವ ಚಾರ್ವಿಕಾ ಬಲಗಾಲಿನ ಅಂಗವೈಕಲ್ಯ ಹೊಂದಿದ್ದಳು. ಈಕೆ ಮನೆಯಲ್ಲಿದ್ದರೆ ದಾರಿದ್ರ್ಯ ಎಂದು ಯಾರೋ ಜ್ಯೋತಿಷಿಗಳು ಸಲಹೆ ನೀಡಿದ್ದರಂತೆ. ಈ ಮಾತು ಕೇಳಿ, ಮೂರು ವರ್ಷಗಳ ಹಿಂದೆ, ತನ್ನ ಅಣ್ಣ ಕೃಷ್ಣಮೂರ್ತಿಯೊಂದಿಗೆ ಶಂಕರ ಜಗಳ ತೆಗೆದಿದ್ದ. ಮನೆ ಬಿಟ್ಟು ಹೋಗಿದ್ದ ಶಂಕರ ಕಳೆದ ಐದು ತಿಂಗಳಿನಿಂದ ಮತ್ತೆ ಅಣ್ಣನ ಮನೆಗೆ ಮರಳಿ ಬಂದಿದ್ದ.
ಅಣ್ಣ ಕೃಷ್ಣಮೂರ್ತಿ ಮತ್ತು ಅತ್ತಿಗೆ ಹೊರಗೆ ಹೋಗಿರುವ ಸಂದರ್ಭ ನೋಡಿ, ಶಂಕರ ಈ ನೀಚ ಕೃತ್ಯ ಮಾಡಿದ್ದಾನೆ. ಚಾರ್ವಿಕಾಳ ಗಂಟಲನ್ನು ಹರಿತ ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಚಾರ್ವಿಕಾ ತಂದೆ ಕೃಷ್ಣಮೂರ್ತಿ ನೀಡಿದ ದೂರಿನ ಪ್ರಕಾರ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.